ಶಂಕರ ಕುರುಪ್, ಜಿ
1901-78. ಭಾರತದ ಮೊತ್ತಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತ ಮಲಯಾಳಮ್ ಕವಿ. ಗೋವಿಂದನ್ ಶಂಕರ ಕುರುಪ್ ಇವರ ಪೂರ್ಣ ಹೆಸರು. ಮಹಾಕವಿ-ಜಿ ಎಂದೇ ಪ್ರಸಿದ್ಧರಾದವರು. ಕೇರಳ ರಾಜ್ಯದ ಎರ್ನಾಕುಲಂ ಜಿಲ್ಲೆಯ ನಾಯತ್ತೋಡು ಎಂಬ ಗ್ರಾಮದಲ್ಲಿ 1901 ಜೂನ್ 5ರಂದು ಜನಿಸಿದರು. ತಂದೆ ನೆಲ್ಲಿಕ್ಕಾಪಿನ ಶಂಕರ ವಾರಿಯರ್, ತಾಯಿ ವಡಕ್ಕೇವೀಡು ಲಕ್ಷ್ಮೀ ಕುಟ್ಟಿ ಅಮ್ಮ. 5 ವರ್ಷದವರಾಗಿದ್ದಾಗಲೇ ತಂದೆಯ ವಿಯೋಗ. ಇವರ ಕಾವ್ಯದಲ್ಲಿ ಮರಣದ ಬಗೆಗೆ ಮತ್ತೆ ಮತ್ತೆ ಚಿಂತನೆ ಕಂಡು ಬರುವುದು. ಬಾಲ್ಯದ ಈ ಆಘಾತದಿಂದ ಗ್ರಾಮದಲ್ಲೇ ಆರಂಭದ ಶಿಕ್ಷಣ ಪಡೆದರು. ಹೆಚ್ಚಿನ ವಿದ್ಯಾಭ್ಯಾಸ ಪಡೆಯಲಾಗದೆ ಉದ್ಯೋಗ ಅರಸತೊಡಗಿದರು. ಕೋಟ್ಟಮತ್ ಚರ್ಚ್‍ಗೆ ಸೇರಿದ ಶಾಲೆಯ ಮುಖ್ಯೋಪಾಧ್ಯಾಯರಾಗಿ (1918), ತಿರುವಿಲ್ಲಾಮಲ ಸರ್ಕಾರಿ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿ (1921), ತ್ರಿಶೂರಿನ ಸರ್ಕಾರಿ ಟೀಚರ್ ಟ್ರೇನಿಂಗ್ ಕಾಲೇಜಿನಲ್ಲಿ ಮಲಯಾಳ ಪಂಡಿತರಾಗಿ (1937), ಅನಂತರ ಇಲ್ಲೇ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು (1956).

	ಅಭಿಜಾತ ಸಾಹಿತ್ಯ ಸಂಪ್ರದಾಯದ ಹಿನ್ನೆಲೆಯೊಂದಿಗೆ ಭಾವಗೀತ ಕ್ಷೇತ್ರ ಪ್ರವೇಶಿಸಿದ ಇವರು ಕ್ರಮೇಣ ರೊಮ್ಯಾಂಟಿಸಿಸಮ್ ಕಡೆಗೆ ತಿರುಗಿದರು. ಇವರ ಖಂಡ ಕಾವ್ಯ ಹಾಗೂ ಕವನಗಳು ಮಲಯಾಳ ಸಾಹಿತ್ಯದಲ್ಲಿ ಹೊಸ ಪರಂಪರೆಯನ್ನು ನಿರ್ಮಿಸಿದುವು. ಇವರು ಕವನ, ಪ್ರಬಂಧ, ನಾಟಕ ಹಾಗೂ ಇನ್ನಿತರ ಪ್ರಕಾರ ಗಳಲ್ಲಿ ಕೃತಿ ರಚಿಸಿದ್ದಾರೆ. ಸಾಹಿತ್ಯ ಕೌತುಕಂ ಭಾಗ   1-4 (1923-30), ಸೂರ್ಯ ಕಾಂತಿ(1933), ನವಾತಿಥಿ (1935), ಮುತ್ತುಗಳ್ (1946), ಓಡಕ್ಕುಉಲ್ (1950), ಪಥಿಕನ್ಡೆ ಪಾಟ್ಟು (1951), ಅಂತರ್ದಾಹಂ (1953), ಜೀವನ ಸಂಗೀತಂ (1964) ಮೊದಲಾದ 25 ಕವನ ಸಂಕಲನಗಳಿವೆ. ಗದ್ಯೋಪಹಾರಂ (1933), ಲೇಖಮಾಲಾ (1944), ಮುತ್ತುಂ ಚಿಪ್ಪಿಯುಂ (1958), ಜೀಯುಡೆ ನೋಟು ಬುಕ್ (1968) ಇವು ಗದ್ಯಕೃತಿಗಳು. ಇಳಂ ಚುಂಡುಗಳ್ (1955), ಓಲಪ್ಪೀಪ್ಪಿ (1958), ಕಾಟ್ಟೇ ವಾ ಕಡಲೇ ವಾ (1968) ಇವು ಶಿಶು ಸಾಹಿತ್ಯ ಕೃತಿಗಳು. ಒರ್ಮಯುಡೆ ಓಳಂಗಳಿಲ್ (1978) ಇವರ ಆತ್ಮ ಚರಿತ್ರೆ. ವಿಲಾಸ ಲಹರಿ (ರುಬಾಯತ್, 1932), ಮೇಘಚ್ಛಾಯ (1943), ಭಾಷಾ ಗೀತಾಂಜಲಿ (ಗೀತಾಂಜಲಿ, 1959), ಏಕೋತ್ತರಶತಿ, ಮಧ್ಯಮ ವ್ಯಾಯೋಗ ಇವು ಅನುವಾದಗಳು; ಇರುಟ್ಟಿನುಮುಬು (1935), ಸಂಧ್ಯಾರಾಗಂ (1971) ಇವರ ನಾಟಕಗಳು. ಇವಲ್ಲದೆ ಪಠ್ಯಪುಸ್ತಕಗಳನ್ನೂ ವ್ಯಾಕರಣ ಗ್ರಂಥಗಳನ್ನೂ ರಚಿಸಿದ್ದಾರೆ. ಇವರು ಹಲವಾರು ನಿಯತಕಾಲಿಕಗಳಿಗೆ ಸಂಪಾದಕರಾಗಿದ್ದರು.

	ಇವರಿಗೆ ಅನೇಕ ಗೌರವ, ಪ್ರಶಸ್ತಿಗಳು ಸಂದಿವೆ. ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1960), ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ (1963), ಭಾರತದ ಪ್ರಥಮ ಜ್ಞಾನಪೀಠ ಪ್ರಶಸ್ತಿ (1965, ಓಡಕ್ಕುಉಲ್), ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ (1967, ವಿಶ್ವದರ್ಶನಂ) ಪದ್ಮಭೂಷಣ ಗೌರವ (1968) ಇವುಗಳಲ್ಲಿ ಪ್ರಮುಖವಾದುವು. ಇವರು 1968ರಲ್ಲಿ ರಾಜ್ಯಸಭಾ ಸದಸ್ಯರಾಗಿದ್ದರು. ಇವರು 1978 ಫೆಬ್ರವರಿ 2ರಂದು ನಿಧನರಾದರು.			
		(ಎ.ಎಮ್.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ